ಕಿನ್‍ಕಾಪು

ಭಾರವೂ ಅಮೂಲ್ಯವು ಆದ ವಿಶಿಷ್ಟ ಬಗೆಯ ಬಟ್ಟೆ(ಬ್ರೋಕೇಡ್). ಇದನ್ನು ಸಾಮಾನ್ಯವಾಗಿ ರೇಷ್ಮೆಯಿಂದ ತಯಾರಿಸುತ್ತಾರೆ. ಬೆಳ್ಳಿ ಹಾಗೂ ಚಿನ್ನದ ಜರತಾರಿ ಎಳೆಗಳನ್ನು ಅಡ್ಡತಂತುಗಳನ್ನಾಗಿ ಉಪಯೋಗಿಸಿ, ಎಬ್ಬಿದ ಹೂ ಮಾದರಿಗಳನ್ನು ಬಿಡಿಸಿ ಬಟ್ಟೆಯನ್ನು ಅಂದಗೊಳಿಸುತ್ತಾರೆ. ಕಿನ್‍ಕಾಪಿನ ಇಂಗ್ಲಿಷ್ ಸಮನಾರ್ಥಕ ಪದ ಬ್ರೋಕೇಡ್ ಎಂಬುದು ಫ್ರೇಂಚ್ ಬ್ರೊಕಾರ್ಟ್ ಎಂಬ ಪದದಿಂದ ನಿಷ್ಪನ್ನವಾಗಿದೆ, ಅಲಂಕೃತ ಬಟ್ಟೆ ಎಂಬುದು ಅದರ ಅರ್ಥ. ಬ್ರೋಕೇಡ್ ಎಂಬ ಹೆಸರು ಲ್ಯಾಟಿನ್ ಭಾಷೆಯಿಂದ ಉಗಮವಾಗಿದೆಯೆಂಬ ಅಭಿಪ್ರಾಯವೂ ಉಂಟು. ಲ್ಯಾಟಿನ್ ಬ್ರೋಕೇಸ್ ಎಂಬುದಕ್ಕೆ ಹೊರಚಾಚಿದ ಅಥವಾ ಚೂಪಾದ ಎಂಬ ಅರ್ಥವಿರುವುದೇ ಇದಕ್ಕೆ ಕಾರಣ.

 ಹಿಂದಿನಿಂದಲೂ ಭಾರತ ಕಿನ್‍ಕಾಪು ಅಥವಾ ಕಲಾಬತ್ತು ಬಟ್ಟೆಗೆ ಪ್ರಸಿದ್ಧವಾಗಿದೆ. ಕಿನ್‍ಕಾಪು ಬಟ್ಟೆಗಳನ್ನು ಭಾರತೀಯ ರಾಜಮಹಾರಾಜರು ಧರಿಸುತ್ತಿದ್ದರು. ಭಾರತದಲ್ಲಿ ಈ ಬಟ್ಟೆಯ ತಯಾರಿಕೆಯ ಬಹು ದೊಡ್ಡ ಕೇಂದ್ರ ವಾರಣಾಸಿ. ಕಿನ್‍ಕಾಪು ಭಾರತದ ಕೈಮಗ್ಗ ತಯಾರಿಕೆಯ ಅತ್ಯಂತ ನಯವಾದ ಬಟ್ಟೆ ಇದರಲ್ಲಿ ಶ್ರೇಷ್ಠ ಬಗೆಯ ಕಿನ್‍ಕಾಪು ಬಟ್ಟೆಯನ್ನು ಕೈಮಗ್ಗದಿಂದಲೇ ಚಿನ್ನ ಬೆಳ್ಳಿ ಜರಿಗಳನ್ನು ಉಪಯೋಗಿಸಿ ಯಥೇಚ್ಛವಾದ ಹಾಗು ಬಹು ಜಟಿಲವಾದ ಚಿತ್ತಾರದ ಮಾದರಿಗಳಿಂದ ಅಲಂಕೃತವಾಗಿರುವಂತೆ ನೇಯುತ್ತಾರೆ. ಚಿತ್ತಾರದ ಮಾದರಿಗಳನ್ನು ಮತ್ತು ಮನಮೋಹಕವಾದ ಬಣ್ಣಗಳನ್ನು ಬನಾರಸ್ ಕಿನ್‍ಕಾಪಿನಲ್ಲಿ ಕಾಣಬಹುದು. 

 ಕಿನ್‍ಕಾಪು ಎಂಬ ಹೆಸರು ಹತ್ತಿ, ರೇಷ್ಮೆ, ಲಿನನ್, ರೇಯಾನ್, ಕೃತಕದಾರ ಮೊದಲಾದ ಪ್ರಮುಖ ತರಹೆಯ ನೇಯ್ಗೆದಾರಗಳಿಂದ ತಯಾರಾದ ಎಲ್ಲ ಬಟ್ಟೆಗಳಿಗೂ ಸಾಮಾನ್ಯವಾಗಿ ಅನ್ವಯವಾಗುತ್ತದೆ. ಹಾಗಿದ್ದರೂ ಅದರ ಪರಿಮಿತ ಅರ್ಥದಲ್ಲಿ ಈ ಹೆಸರು ನಮೂನೆಗಳಿಂದ ಅಲಂಕರಿಸುವ ವಿಧಾನದಲ್ಲಿ ಚಿನ್ನ ಮತ್ತು ಬೆಳ್ಳಿ ಜರಿಗಳಿಂದ ವಿಸ್ತøತ ಹೂಮಾದರಿಗಳನ್ನು ಬಿಡಿಸಿ ನೇಯುವ ಬಟ್ಟೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಬಟ್ಟೆಗಳ ಮೇಲೆ ಆಗಬೇಕಾದ ನಿರ್ದಿಷ್ಟ ಹೊಂದಿಕೆಗೆ ತಕ್ಕಂತೆ, ಸಾಧಾರಣ ಬಟ್ಟೆಯ ಮೇಲೆ ಹಾಸು ಎಳೆಗಳನ್ನು ಇಲ್ಲವೆ ಅಡ್ಡೆಎಳೆಗಳ ಹಿಂಜುಗಳನ್ನು ಅಥವಾ ಹಾಸುಎಳೆ ಮತ್ತು ಅಡ್ಡೆಎಳೆಗಳೆರಡನ್ನೂ ಯಥೇಚ್ಛವಾಗಿ ಕಾಣಿಸಿ ಚಿತ್ರನಮೂನೆಗಳನ್ನು ನೇಯಬಹುದು. ಹೆಚ್ಚಿಗೆ ಅಡ್ಡಎಳೆಗಳಿಂದ ಚಿತ್ರ ನಮೂನೆಗಳನ್ನು ನೇಯುವ ವಿಧಾನವನ್ನು ವಾರಣಾಸಿಯಲ್ಲಿ ಸರ್ವಸಾಮಾನ್ಯವಾಗಿ ಅನುಸರಿಸುತ್ತಾರೆ. ಆ ಬಗ್ಗೆ ಬೇಕಾದ ಹೆಚ್ಚಿಗೆ ಅಡ್ಡಎಳೆಗಳನ್ನು 3-4 ಅಂಗುಲಗಳ ಬಿದಿರಿನ ಸಿರ್ಕಿಗಳು ಒದಗಿಸುತ್ತವೆ. ಸಿರ್ಕಿನೇಯ್ಗೆ ಸಾಧನಗಳ ಮೇಲೆ ಹೆಚ್ಚಿಗೆ ಬೇಕಾಗಿರುವ ಅಡ್ಡಎಳೆಗಳನ್ನು ಸುತ್ತಿರುತ್ತಾರೆ. ನೇಯ್ಗಯಲ್ಲಿ ಎಷ್ಟು ಸಿರ್ಕಿಗಳು ಬೇಕಾಗುವುವೆಂಬುದು ಚಿತ್ರ ನಮೂನೆಗಳ ರಚನೆ, ಅವುಗಳಿಗೆ ಬೇಕಾದ ಬಣ್ಣ, ಬಟ್ಟೆಯ ಉದ್ದಕ್ಕೂ ನೇಯ್ಗಯಾಗುವ ಚಿತ್ತಾರದ ಮಾದರಿಗೆ ಅವಶ್ಯವಾದ ನೇಯ್ಗೆಯ ಪುನರಾವೃತ್ತಿ ಇವನ್ನು ಅವಲಂಬಿಸಿದೆ.

 ಕಿನ್‍ಕಾಪು ಬಟ್ಟೆಯ ತಯಾರಿಕೆಯಲ್ಲಿ ಉಪಯೋಗಿಸುವ ಮಗ್ಗಗಳೆಲ್ಲವೂ ಬಿದಿರಿನ ಹಣಿಗೆಯಿಂದ ಕೂಡಿದ ಲಾಳಿಬೀಸಿ ನೇಯುವ ಗುಂಡಿಯ ಕೈಮಗ್ಗಗಳಾಗಿವೆ. ಹೆಚ್ಚು ಅಡ್ಡೆಎಳೆ ಚಿತ್ರಗಳು ಜಾಲದ ಸಹಾಯದಿಂದ ರಚನೆಯಾಗುತ್ತದೆ. ಚಿತ್ರ ನಮೂನೆಗಳನ್ನು ನಕ್ಷಾಬಂಧಕರು, ಅಂದರೆ ನಮೂನೆಗಳನ್ನು ರಚಿಸುವವರು, ನಕ್ಷೆಗಳಿಗೆ ಅಳವಡಿಸುತ್ತಾರೆ. ತರುವಾಯ ನಕ್ಷೆಗಳನ್ನು ನೇಯ್ಗೆಯಲ್ಲಿ ಬಿಡಿಸಿಕೊಳ್ಳಲಾಗುವುದು. ನಕ್ಷೆ ಅಥವಾ ನಮೂನೆಗಳನ್ನು ಬಿಡಿಸಲು ಮಗ್ಗದ ಚಲನೆಯಲ್ಲಿ ಇಬ್ಬರ ಸಹಾಯ ಬೇಕಾಗುವುದು: ಅವನಲ್ಲಿ ಒಬ್ಬ ನೇಯಲು ಕುಳಿತುಕೊಳ್ಳುತ್ತಾನೆ. ಮತ್ತೊಬ್ಬ ಜಾಲವನ್ನು ಎಳೆಯಲು ನಿಲ್ಲುತ್ತಾನೆ. ಇತ್ತೀಚೆಗೆ ಜಾಲವನ್ನು ಎಳೆಯುವಾತನಿಗೆ ಪ್ರತಿಯಾಗಿ ಹೆಚ್ಚು ಭಾರವಿಲ್ಲದ ಜಾಕ್ವಾರ್ಡ್ ಎಂಬ ಸಾಧನಗಳನ್ನು ಉಪಯೋಗಿಸುತ್ತಾರೆ.

 ಕಿನ್‍ಕಾಪಿಗೆ ಬಟ್ಟೆಯನ್ನು ಸಾಮಾನ್ಯ ವಿಧಾನದಲ್ಲಿಯೇ ನೇಯುತ್ತಾರೆ. ಆದರೆ ಲೋಹದ ತಂತುಗಳನ್ನು ಇಲ್ಲವೆ ಬಟ್ಟೆಕಟ್ಟಿದ ರೇಷ್ಮೆ ಎಳೆಗಳನ್ನು ಹೆಚ್ಚಿಗೆ ಅಡ್ಡೆಎಳೆಗಳನ್ನಾಗಿ ಮಗ್ಗದಲ್ಲಿ ಉಪಯೋಗಿಸುತ್ತಾರೆ. ಇಂಥ ಹೆಚ್ಚಿಗೆ ಅಡ್ಡಎಳೆಗಳನ್ನು ಎಲ್ಲಿ ಬೇಕೊ ಅಲ್ಲಿ ಅಲಂಕಾರಕ್ಕಾಗಿ ಮಾತ್ರವೇ ಉಪಯೋಗಿಸಿಕೊಳ್ಳುತ್ತಾರೆ. ಕೆಲವು ಸಮಯಗಳಲ್ಲಿ, ಬಣ್ಣದ ಅಡ್ಡತಂತುಗಳನ್ನು ಬಟ್ಟೆಯ ಇಡೀ ಅಡ್ಡಗಲಕ್ಕೆ ವ್ಯಾಪಿಸುವಂತೆ ನೇಯಲು ಸಾಧ್ಯ. ಈ ವಿಧಾನದಲ್ಲಿ ಸಿರ್ಕಿಗಳ ಅವಶ್ಯಕತೆ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಅಲ್ಲಲ್ಲಿ ಬೇಕಿಲ್ಲದ ಹೆಚ್ಚಿಗೆ ಬಣ್ಣದ ಅಡ್ಡತಂತುಗಳನ್ನು ಕತ್ತರಿಸುತ್ತಾರೆ. ಬಹುಮಟ್ಟಿಗೆ ಕಿನ್‍ಕಾಪು ಬಟ್ಟೆಗಳ ನೇಯ್ಗೆಯಲ್ಲಿ ಬಟ್ಟೆಯ ಹಿಂಭಾಗ ಮಗ್ಗಕ್ಕೆ ಮೇಲ್ಮುಖವಾಗಿರುವಂತೆ ನೇಯ್ಗೆಯ ವ್ಯವಸ್ಥೆ ಇರುತ್ತದೆ.

 ಕಿನ್‍ಕಾಪು ಬಟ್ಟೆಯನ್ನು ತಿರುಗುಮುರುಗು ಮಾಡಿ ಉಪಯೋಗಿಸುವಂತಿಲ್ಲ ಅದನ್ನು ನೇಯುವುದಕ್ಕೆ ಹೆಚ್ಚು ಕಾಲ ಹಿಡಿಯುವುದಲ್ಲದೆ ಈ ಕೆಲಸ ಬಲುತ್ರಾಸವಾದದ್ದೂ ಹೌದು. ಕೆಲವು ಇಂಚುಗಳಷ್ಟು ಪ್ರಮಾಣದ ಕಿನ್‍ಕಾಪ್‍ನ್ನು ಮಾತ್ರವೇ ಇಡೀ ದಿನದಲ್ಲಿ ನೇಯಲು ಸಾಧ್ಯ. ಆದ್ದರಿಂದ ಅದು ಹೆಚ್ಚು ಬೆಲೆಬಾಳುವ ಬಟ್ಟೆಯಾಗಿದೆ.

 ಅಪ್ಪಟವಾದ ಬ್ರಾಕೇಡ್ ಅಥವಾ ಕಿನ್‍ಕಾಪು ಬಟ್ಟೆಗೆ ಅತ್ಯುತ್ತಮ ರೇಷ್ಮೆಯನ್ನು ಹಾಗೂ ಅಪ್ಪಟ ಚಿನ್ನ ಮತ್ತು ಬೆಳ್ಳಿ ಜರಿಯನ್ನು (ಕಲಾಬತ್ತು) ಉಪಯೋಗಿಸುತ್ತಾರೆ ಇತ್ತೀಚೆಗೆ, ಅಗ್ಗದ ಬಗೆಯ ಕಿನ್‍ಕಾಪು ಬಟ್ಟೆಗಳಿಗೆ ಬಣ್ಣ ಕಟ್ಟಿದ ಕೃತಕ ರೇಷ್ಮೆಯನ್ನೂ ಸಾಮಾನ್ಯ ಜರಿಯನ್ನೂ ಉಪಯೋಗಿಸುತ್ತಾರೆ.        

 (ಎಲ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ